ಉತ್ತರ ಕನ್ನಡ: ಕಾರವಾರದಿಂದ ಗೋವಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಕಪ್ಪೆಗಳ ರಕ್ಷಣೆ; ಚಾಲಕ, ನಿರ್ವಾಹಕನ ಬಂಧನ ಕಾರವಾರ-ಸದಾಶಿವಗಡ ನಡುವಿನ ಕಾಳಿ ಸೇತುವೆ ಮೇಲೆ ಖಾಸಗಿ ಬಸ್ ತಡೆದು ಲಗೇಜ್ ಜಾಗದಲ್ಲಿ ಚೀಲದಲ್ಲಿ ಸಂಗ್ರಹಿಸಿಟ್ಟಿದ್ದ ಕಪ್ಪೆಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರವಾರ: ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಇಂಡಿಯನ್ ಬುಲ್ ಫ್ರಾಗ್ ಜಾತಿಗೆ ಸೇರಿದ ಕಪ್ಪೆಗಳನ್ನು ಕಾರವಾರದ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಾಲಕ ಮತ್ತು ನಿರ್ವಾಹಕರನ್ನು ಬಂಧಿಸಲಾಗಿದೆ.ಕಾರವಾರ-ಸದಾಶಿವಗಡ ನಡುವಿನ ಕಾಳಿ ಸೇತುವೆ ಮೇಲೆ ಖಾಸಗಿ ಬಸ್ ತಡೆದು ಲಗೇಜ್ ಜಾಗದಲ್ಲಿ ಚೀಲದಲ್ಲಿ ಸಂಗ್ರಹಿಸಿಟ್ಟಿದ್ದ ಕಪ್ಪೆಗಳನ್ನು ವಶಕ್ಕೆ ಪಡೆಯಲಾಗಿದೆ. ಅರಣ್ಯಾಧಿಕಾರಿಗಳ ಪ್ರಕಾರ, ಗೋವಾಕ್ಕೆ ಭೇಟಿ ನೀಡುವ ವಿದೇಶಿಯರು ಈ ಬುಲ್‌ ಫ್ರಾಗ್‌ಗಳನ್ನು ವಿಶೇಷ ಖಾದ್ಯವನ್ನಾಗಿ ಇಷ್ಟಪಡುತ್ತಾರೆ.'ಹೆಚ್ಚಿನ ಬೇಡಿಕೆಯಿಂದಾಗಿ, ಈ ಜಾತಿಯ ಕಪ್ಪೆಯನ್ನು ಹಿಡಿದು ಗೋವಾದ ರೆಸಾರ್ಟ್‌ಗಳಿಗೆ ಮಾರಾಟ ಮಾಡುವ ಜನರ ದೊಡ್ಡ ಜಾಲವಿದೆ' ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಂಧಿತ ಗೋವಾ ನಿವಾಸಿಗಳಾದ ಚಾಲಕ ಸಿದ್ದೇಶ್ ದೇಸಾಯಿ ಮತ್ತು ಕಂಡಕ್ಟರ್ ಜಾನು ಲೂಲಿಮ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ ಮಾತನಾಡಿ, ಇದು ಎರಡನೇ ಪ್ರಕರಣವಾಗಿದೆ. ಹಿಂದಿನದು 2017-2018ರಲ್ಲಿ ವರದಿಯಾಗಿತ್ತು. ಅವರು (ಸ್ಮಗ್ಲರ್‌ಗಳು) ಮತ್ತೆ ಬರುತ್ತಾರೆ ಎಂದು ನನಗೆ ತಿಳಿದಿತ್ತು. ನಾವು ಅಲರ್ಟ್ ಆಗಿದ್ದೇವೆ ಮತ್ತು ಅಪರಾಧಿಗಳನ್ನು ಹಿಡಿಯಲು ಸನ್ನದ್ಧರಾಗಿದ್ದೆವು ಎಂದು ಅವರು ಹೇಳಿದರು.